ಆಲೊ

ಇವು ಲಿಲಿಯೇಸೀ ಕುಟುಂಬಕ್ಕೆ ಸೇರಿದ ಒಂದು ಸಸ್ಯಜಾತಿ. ಇದರಲ್ಲಿ ಸುಮಾರು 18 ಬಗೆಗಳಿವೆ. ದಕ್ಷಿಣ ಆಫ್ರಿಕ, ಅರೇಬಿಯ ಮತ್ತು ಮೆಡಿಟರೇನಿಯನ್ ದೇಶದ ಮೂಲವಾಸಿ ಸಸ್ಯಗಳು. ಕೆಲವು ಬಾಹ್ಯಲಕ್ಷಣಗಳಲ್ಲಿ ಅಗೇವ್ ಸಸ್ಯಗಳನ್ನು ಹೋಲುವುದರಿಂದ ಇವನ್ನು ಆ ಸಸ್ಯಗಳೆಂದು ತಪ್ಪು ತಿಳಿವ ಸಾಧ್ಯತೆ ಇದೆ. ಕಾಂಡವಿಲ್ಲದೆ ಅಥವಾ ಚಿಕ್ಕ ಕಾಂಡವಿರುವ ಆಲೊ ಸಸ್ಯಗಳು ಪೊದೆಯಾಗಿ ಬೆಳೆಯುತ್ತವೆ. ಎಲೆಗಳು ಗುಂಪಾಗಿರುತ್ತವೆ. ಕೆಲವು ಬಗೆಗಳಲ್ಲಿ ಎಲೆಗಳು ಸಾಲುಗಳಾಗಿ ಅಥವಾ ಹರಡಿಕೊಂಡಂತೆ ಜೋಡಣೆಕೊಂಡಿರುತ್ತವೆ. ಎಲೆಗಳ ಅಂಚು ನಯ. ಹಸುರು ಬೂದು ಅಥವಾ ಹಳದಿ ಬಣ್ಣದ ಒರಟಾದ ಮುಳ್ಳುಗಳಿಂದ ಕೂಡಿವೆ. ಹೂಗೊಂಚಲು ಎಲೆಯ ಗುಂಪಿನ ಹೊರಬಂದು ಉದ್ದವಾದ ದಿಂಡಿನಿಂದ ರೂಪಿತವಾಗಿರುತ್ತದೆ. ಹೂಗೊಂಚಲು, ಅಂತ್ಯಾರಂಭಿ ಮಾದರಿಯದು. ಅಗೇವ್ ಸಸ್ಯಗಳು ಹೂಗೊಂಚಲು ಹೊರಬಂದ ಅನಂತರ ಸಾಯುತ್ತವೆ. ಆದರೆ ಆಲೊ ಜಾತಿಯ ಸಸ್ಯಗಳು ಸಾಯುವುದಿಲ್ಲ. ಹೂಗಳ ಬಣ್ಣ ಕಿತ್ತಳೆ, ಕೆಂಪು ಅಥವಾ ಹಳದಿ; ಗಂಟೆಯಾಕಾರದವು.  
 
ಎಲೆಗಳನ್ನು ಕತ್ತರಿಸಿದಾಗ ಒಂದು ಬಗೆಯ ಲೋಳೆ ದ್ರಾವಣ ಹೊರಬಂದು, ಅನಂತರ ಅದು ಘನರೂಪವನ್ನು ತಾಳುತ್ತದೆ. ಇದರಲ್ಲಿರುವ ರೆಸಿನಸ್ ವಸ್ತುಗಳನ್ನು ಔಷಧಗಳ ತಯಾರಿಕೆಯಲ್ಲಿ ಬಳಸುತ್ತಾರೆ. ಬೀಜ ಮತ್ತು ಕಾಂಡದ ತುಂಡುಗಳಿಂದ ಸಸ್ಯವನ್ನು ವೃದ್ಧಿ ಮಾಡಬಹುದು. ಅನ್ಯ ಪರಾಗಸ್ಪರ್ಶವಾದರೆ ತಮ್ಮ ಮೂಲಲಕ್ಷಣಗಳನ್ನು ಕಳೆದುಕೊಳ್ಳಬಹುದಾದ್ದರಿಂದ ಬೀಜಗಳಿಂದ ವೃದ್ಧಿಮಾಡುವುದು ಅಪೇಕ್ಷಣೀಯವಲ್ಲ. ಆಲೊ ಸಸ್ಯ ಅಗೇವ್ ಸಸ್ಯಗಳಿಗಿಂತ ಬೇಗ ಬೆಳೆಯುವ ಗುಣ ಹೊಂದಿದೆ. ಆಲೊ ಅರ್ಬೊರಿಸೆನ್ಸ್ ಈ ಜಾತಿಯ ಒಂದು ಮುಖ್ಯ ಪ್ರಭೇದ. ಇದು ತನ್ನ ತವರಿನಲ್ಲಿ ಸ್ವೇಚ್ಛೆಯಾಗಿ ಸುಮಾರು 4 ಮೀ. ಎತ್ತರ ಬೆಳೆಯುತ್ತದೆ. ಕಾಂಡದ ಕೆಳಭಾಗದಿಂದ ಹೊರಬಂದು ಸರಿಯಾದ ಅವಕಾಶ ಸಿಕ್ಕಿದರೆ ಬೇರು ಬಿಡುತ್ತವೆ.  ಎಲೆ ನೀಳವಾಗಿ 60 ಸೆಂ.ಮೀ. ಉದ್ದವಾಗಿ ಹಿಂದಕ್ಕೆ ಬಾಗಿದೆ. ಇದರ ಅಂಚುಗಳಲ್ಲಿ ಮುಳ್ಳುಗಳು ಇವೆ. ಎಲೆಯ ಆಕಾರ ಕತ್ತಿಯಂತೆ. ಬಣ್ಣ ಬೂದು ಮಿಶ್ರಿತ ಹಸುರು. ಹೂಗೊಂಚಲು ಉದ್ದವಾದ ಅಕ್ಷದ ಮೇಲೆ ಗೋಪುರದಂತೆ ಇದೆ. ಕೆಂಪುಬಣ್ಣ. ಆಲೊ ಅರಿಸ್ಟೇಟ ಎಂಬುದು ಇನ್ನೊಂದು ಪ್ರಭೇದ. ಇದು ದಕ್ಷಿಣ ಆಫ್ರಿಕದ ನೇಟಾಲ್ ಮತ್ತು ಕೇಪ್ ಪ್ರಾವಿನ್ಸ್‍ನ ಮೂಲವಾಸಿ. ಇದರಲ್ಲಿ ನಿರ್ದಿಷ್ಟವಾದ ಕಾಂಡವಿಲ್ಲ. ಇದರ ಎಲೆಗಳು ಗುಂಪಿನಲ್ಲಿ ನಿಬಿಡವಾಗಿದ್ದು. ನೋಡಲು ಅಂದವಾಗಿ ಕಾಣುತ್ತವೆ. ಎಲೆಗಳು 60 ಸೆಂ.ಮೀ. ಉದ್ದ 5 ಸೆಂ.ಮೀ. ಅಗಲವಾಗಿ ತೊಟ್ಟಿನ ಭಾಗದಲ್ಲಿ ಅಗಲವಾಗಿಯೂ ಮಂದವಾಗಿಯೂ ಇದ್ದು, ತುದಿಯ ಕಡೆಗೆ ಕಿರಿದಾಗುತ್ತವೆ. ಎಲೆಗಳ ಆಕಾರ ಚಾಕುವಿನಂತೆ. ಅಂಚುಗಳು ಬಿಳಿಯ ಮುಳ್ಳುಗಳನ್ನು ಹೊಂದಿದ್ದು ಹೊಳೆಯುತ್ತವೆ. ಹೂಗೊಂಚಲಿನ ಬಣ್ಣ ಕೆಂಪು. ಈ ಜಾತಿಯ ಸಸ್ಯಗಳನ್ನು ಎಲೆಯ ತುಂಡುಗಳಿಂದ ವೃದ್ಧಿಮಾಡಬಹುದು. ಆಲೊ ಬ್ರೆವಿಫೋಲಿಯ ಎಂಬ ಪ್ರಭೇದದಲ್ಲಿ ಕಾಂಡ ಚಿಕ್ಕದು. ಅನೇಕ ಮೋಸುಗಳು ಹೊರಬಂದು ವೃತ್ತಾಕಾರದ ಗುಂಪುಗಳಾಗುತ್ತವೆ. ನೀಲಿ ಮಿಶ್ರಿತ ಹಸಿರು ಬಣ್ಣದ ಎಲೆಗಳು. ತ್ರಿಕೋಣಾಕಾರವಾಗಿ ಚಿಕ್ಕದಾಗಿಯೂ ಮೆದುವಾಗಿಯೂ ಇವೆ. ಅಂಚುಗಳಲ್ಲೂ ಅಪೂರ್ವವಾಗಿ ಎಲೆಗಳ ಕೆಳಭಾಗದಲ್ಲೂ ಮುಳ್ಳುಗಳು ಇವೆ. ಸ್ಥಳೀಯವಾಗಿ ಈ ಸಸ್ಯವನ್ನು ಲೋಳೆಸರ, ಹಪ್ಪಳದ ಎಲೆ ಎಂದು ಕರೆಯುವುದಿದೆ.

ಆಲೊ ಪೊಲಿಫಿಲಿಸ್ ಹೆಸರಿನ ಪ್ರಭೇದ ದಕ್ಷಿಣ ಆಫ್ರಿಕದಲ್ಲಿ ಹೆಚ್ಚಾಗಿ ಬೆಳೆಯುತ್ತದೆ. ಇದರ ಕಾಂಡದ ಎತ್ತರ 10 ಸೆಂ.ಮೀ. ಎಲೆಗಳು ಕಾಂಡದ ಮೇಲೆ ಸುರುಳಿಯ ರೂಪದಲ್ಲಿವೆ. ಇವು ಸುಮಾರು 25-30 ಸೆಂ.ಮೀ. ಉದ್ದ, 8-10 ಸೆಂ.ಮೀ. ಅಗಲವಾಗಿದ್ದು ತೊಟ್ಟಿನ ಕಡೆ ಮಂದವಾಗಿವೆ. ಎಲೆ ಕುಡುಗೋಲು ಆಕಾರದಲ್ಲಿದ್ದು ತುದಿಯಲ್ಲಿ ಕಂದು ಚುಕ್ಕೆಗಳಿಂದಲೂ ಅಂಚುಗಳಲ್ಲಿ ಬೂದು ಮಿಶ್ರಿತ ಹಸಿರು ಬಣ್ಣದಿಂದಲೂ ಕೂಡಿರುತ್ತವೆ. ಅದರ ಅಂಚುಗಳಲ್ಲಿ 2-12 ಬಾಗಿರುವ ಮತ್ತು ಮೂರು ಮೂಲೆಯುಳ್ಳ ಮುಳ್ಳುಗಳಿವೆ. ಹೂಗೊಂಚಲು 40-60 ಸೆಂ.ಮೀ. ಎತ್ತರವಾಗಿದ್ದು ಹೆಚ್ಚು ಕವಲೊಡೆದಿರುತ್ತದೆ. ಹೂವಿನ ಉದ್ದ ಸುಮಾರು 2-4 ಸೆಂ.ಮೀ. ಬಣ್ಣ ಹಸುರು. ತುದಿ ಕಡುಗೆಂಪು.
ಆಲೊ ಕಾನ್‍ಸಿನ್ನಾ ಪ್ರಭೇದ ಬಹು ಅಂದವಾದ ಸಸ್ಯವೆಂದು ಹೆಸರು ಪಡೆದಿದೆ. ಇದರ ಎಲೆಗಳು ಗುಂಪಿನಲ್ಲಿ ತೆಳುವಾಗಿದ್ದು ತುದಿಗಳು ಹಿಂದಕ್ಕೆ ಬಾಗಿರುತ್ತವೆ; ಕೆಳಭಾಗದಲ್ಲಿ ಬಿಳಿಯ ಮಚ್ಚೆಗಳು ಇವೆ. ಎಲೆಯ ಅಂಚುಗಳಲ್ಲಿ ತ್ರಿಕೋಣಾಕಾರದ ಮುಳ್ಳುಗಳಿವೆ.

ಆಲೊ ಹ್ಯೂಮಿಲಿಸ್ ಪ್ರಭೇದ ಕೂಡ ಅಂದಕ್ಕೆ ಹೆಸರಾಗಿದೆ. ಈ ಪ್ರಭೇದದ ಸಸ್ಯಗಳ ಗುಂಪಿನಲ್ಲಿ ಎಲೆಗಳು ಒತ್ತಾಗಿದ್ದು ಮುಳ್ಳುಗಳಿಂದ ಕೂಡಿರುತ್ತವೆ. ಮೇಲು ಮತ್ತು ಕೆಳಭಾಗದ ಸಾಲುಗಳಲ್ಲಿ ಮುಳ್ಳುಗಳಿವೆ. ಸಸ್ಯಗಳ ಪಕ್ಕದಲ್ಲಿ ತನ್ನ ತಾಯಿ ಸಸ್ಯವನ್ನು ಹೋಲುವ ಮೋಸುಗಳು ಕಾಣುತ್ತವೆ.

ಆಲೊ ಸಪೊನೇರಿಯ ಒಂದು ಕುಬ್ಜಪ್ರಭೇದ. ಇದರ ಹಸಿರು ಎಲೆಗಳ ಮೇಲೆ ಇರುವ ಬಿಳಿಯ ಮಚ್ಚೆಗಳೂ ಎಲೆಗಳು ಒತ್ತಾಗಿರುವ ಮತ್ತು ಮಧ್ಯೆ ತಗ್ಗಾಗಿರುವ ಗುಣಗಳೂ ಇದರ ವೈಚಿತ್ರ್ಯಕ್ಕೆ ಬಹುಮಟ್ಟಿನ ಕಾರಣವೆನಿಸಿವೆ. ಎಲೆಗಳು ಬುಡದಲ್ಲಿ ಅಗಲವಾಗಿದ್ದು ತುದಿಯಕಡೆ ಹೋದಂತೆ ಕಿರಿದಾಗುತ್ತವೆ; ಅಂಚುಗಳಲ್ಲಿ ತ್ರಿಕೋಣಾಕಾರದ ಕಂದುಬಣ್ಣದ ಮುಳ್ಳುಗಳಿವೆ.
ಆಲೊ ಸ್ಟ್ರಯೇಟ ಪ್ರಭೇದದಲ್ಲಿ ಕಾಂಡವಿಲ್ಲ, ಎಲೆಗಳು ನಿಬಿಡ. ಎಲೆಯ ಅಂಚುಗಳಲ್ಲಿ ಮುಳ್ಳುಗಳಿಲ್ಲದೆ ಬಿಳುಪಾದ ಎಳೆಗಳಿವೆ. ಬೆಂಗಳೂರಿನ ಲಾಲ್‍ಬಾಗಿನಲ್ಲಿ ಕೆಲವು ಕಲ್ಲೇರಿಗಳಲ್ಲಿ ಇವನ್ನು ನೋಡಬಹುದು. ಈ ಸಸ್ಯಗಳು ನಗರಗಳ ಅನೇಕ ಮನೆಗಳಲ್ಲಿ ಅಲಂಕಾರದ ಸಸ್ಯಗಳಾಗಿ ಶೋಭಿಸುತ್ತವೆ.

ಆಲೋವೇರಿಗೇಟ ಪ್ರಭೇದ ಸಾಮಾನ್ಯವಾಗಿ ಅನೇಕ ಕಡೆಗಳಲ್ಲಿ ಬೆಳೆಯುವುದನ್ನು ಕಾಣಬಹುದು. ಇದಕ್ಕೆ ನಿರ್ದಿಷ್ಟವಾದ ಕಾಂಡವಿಲ್ಲ. ಎಲೆಗಳು ಗುಂಪಾಗಿರುತ್ತವೆ. ಅವುಗಳ ಅಂಚುಗಳಲ್ಲಿ ಮತ್ತು ಇತರ ಭಾಗಗಳಲ್ಲಿ ಬಿಳಿಯ ಮಚ್ಚೆಗಳು ಇವೆ. ಅತಿ ಹಸಿರು ಬಣ್ಣದ ಮಧ್ಯೆ ಇರುವ ಬಿಳಿಯ ಮಚ್ಚೆಗಳು ಅಂದಕ್ಕೆ ಮೆರಗುಕೊಡುತ್ತವೆ. ಈ ಸಸ್ಯಗಳ ಪಕ್ಕದಲ್ಲಿ ಮೋಸುಗಳು ಅಧಿಕವಾಗಿ ಬರುತ್ತವೆ. ಸಾಮಾನ್ಯವಾಗಿ ಮೋಸುಗಳಿಂದ ಈ ಸಸ್ಯವನ್ನು ವೃದ್ಧಿಮಾಡುತ್ತಾರೆ.
(ಡಿ.ಎಂ.)
(ಪರಿಷ್ಕರಣೆ: ಕೆ ಬಿ ಸದಾನಂದ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ